ಪಣಿಕರ್, ಕೆ ಸಿ ಎಸ್
(1911-1977) ಚಿತ್ರ ಕಲಾವಿದ. ಕೊಯಮತ್ತೂರಿನವರು. ತಂದೆ ಮದರಾಸು ಸರ್ಕಾರದ ವೈದ್ಯ ಇಲಾಖೆಯಲ್ಲಿ ವೈದ್ಯರಾಗಿದ್ದರು. ವಿದ್ಯಾಭ್ಯಾಸ ಕೆಲವು ವರ್ಷ ಕೇರಳದಲ್ಲಿ ಜರುಗಿತು. ಪರಿಸರದ ಸುಂದರ ನಿಸರ್ಗ ಇವರನ್ನು ಆಕರ್ಷಿಸಿತು. ಇದರಿಂದಾಗಿ ಸ್ವಾಭಾವಿಕ ವರ್ಣಗಳ ಚಿತ್ರರಚನೆಗೆ ತೊಡಗಿದರು. ಭಾವನಾತ್ಮಕ ಹಾಗೂ ನವ್ಯಚಿತ್ರಕಲೆಗೆ ಕೈ ಹಾಕಿದ್ದು ತಮ್ಮ ಕೊನೆಯ ದಿನಗಳಲ್ಲಿ 1922ರಲ್ಲಿ ಜಲವರ್ಣ ಪ್ರಕೃತಿ ಚಿತ್ರ ರಚನೆ ಪ್ರಾರಂಭಿಸಿದರು. ವಿಶ್ವವಿಖ್ಯಾತ ಕಲಾವಿದ ಟರ್ನರನ ಪರಂಪರೆ ಕಲಾವಿದಜಾನ್‍ಸೆಲ್ ಕೊಟ್‍ಮನ್ ಎಂಬ ಪ್ರಸಿದ್ಧ ಬ್ರಿಟಿಷ್ ಜಲವರ್ಣ ಚಿತ್ರಕಾರ ಇವರ ಮೇಲೆ ಪ್ರಭಾವ ಬೀರಿದ. ಇವರ ನಿಸರ್ಗ ಚಿತ್ರಗಳು 1928-30ರಲ್ಲಿ ಮದರಾಸು ಲಲಿತಕಲಾ ಸಂಸ್ಥೆಯಲ್ಲಿ ನಡೆದ ಅಖಿಲಭಾರತ ಕಲಾ ಪ್ರದರ್ಶನದಲ್ಲಿ ಬಹುಜನರ ಮೆಚ್ಚುಗೆ ಗಳಿಸಿದುವು.

	ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನಂತರ ಪಣಿಕರ್ ಕೆಲವಾರು ವರ್ಷ ಕಷ್ಟ ಜೀವನ ನಡೆಸಿದರು. ತಂತೀ ಕಛೇರಿಯಲ್ಲಿ 5 ವರ್ಷಗಳು ಕೆಲಸ ಮಾಡಿದ ಅನಂತರ ರಾಜಿನಾಮೆ ಕೊಟ್ಟರು. ವಿಧಿಯಿಲ್ಲದೆ ಒಂದು ವರ್ಷ ವಿಮೆ ಉದ್ಯೋಗದಲ್ಲೂ ಕಾಲಹಾಕಿದರು. 1936ರಲ್ಲಿ ಮದರಾಸು ಕಲಾಶಾಲೆ ಸೇರಿದರು. ಪ್ರಿನ್ಸಿಪಾಲ್ ದೇವಿಪ್ರಸಾದ್ ರಾಯ್‍ಚೌಧರಿ ಅವರ ಕೈಕೆಳಗೆ ಮೂರುವರ್ಷ ಚಿತ್ರ ಕಲಾಭ್ಯಾಸ ನಡೆಸಿದರು. 1940ರಲ್ಲಿ ಕಲಾ ಡಿಪ್ಲೊಮ ಪಡೆದರು. ಆ ವೇಳೆಯಲ್ಲಿ ರಚಿಸಿದ ಇವರ ಕೃತಿಗಳು ದೇಶದ ಒಳಗೂ ಹೊರಗೂ ಗೌರವ ಸ್ಥಾನ ಪಡೆದವು. ಜಲವರ್ಣ ವಿಭಾಗದಲ್ಲಿ ಅತ್ಯುತ್ತಮ ಕೃತಿ ಎಂದು 1938ರಲ್ಲಿ ಕಲ್ಕತ್ತ ಅಕಾಡೆಮಿ ಇವರ ಒಂದು ಕೃತಿಯನ್ನು ಬಹುಮಾನಿಸಿತು. ಅನೇಕ ಪ್ರದರ್ಶನಗಳಲ್ಲಿ ಇವರ ಕೃತಿಗಳಿಗೆ ಬಹುಮಾನಗಳು ಬಂದುವು. 1954ರಲ್ಲಿ ಭಾರತ ಸರ್ಕಾರ ಇವರನ್ನು ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯರನ್ನಾಗಿ ನಾಮಕರಣ ಮಾಡಿತು.

	ಮದರಾಸು ದೆಹಲಿ ಇಂಡಿಯ ಹೌಸ್ ಆಲ್ಡ್ ವಿಚ್ ಲಂಡನ್ನಲ್ಲಿ (ಉತ್ತರ ಫ್ರಾನ್ಸ್) ಮತ್ತು ಪ್ಯಾರಿಸ್‍ಗಳಲ್ಲಿ ಇವರ ಚಿತ್ರಗಳು ಪ್ರದರ್ಶಿತವಾದವು.

	ಇವರ ಚಿತ್ರಗಳು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆಟ್ರ್ಸ್, ಮದರಾಸಿನ ನ್ಯಾಷನಲ್ ಆಟ್ರ್ಸ್ ಗ್ಯಾಲರಿ, ಸರ್ಕಾರಿ ಕಲಾಸಂಗ್ರಹಾಲಯಗಳು ಅಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲೂ ಖಾಸಗಿ ವ್ಯಕ್ತಿಗಳಲ್ಲೂ ಸಂಗ್ರಹವಾಗಿವೆ. 1957ರಲ್ಲಿ ಮದರಾಸು ಆಟ್ರ್ಸ್ ಸ್ಕೂಲಿನಲ್ಲಿ ಇವರು ಪ್ರಿನ್ಸಿಪಾಲರಾಗಿ ಪ್ರಗತಿಪರ ಕಲಾವಿದರ ಬಳಗದ ಪ್ರಮುಖ ಚಾಲಕರಾದರು. ಕಲಾವಿದರಿಗಾಗಿ ಮದರಾಸಿನಲ್ಲಿ ಚೋಳಮಂಡಲ ಎಂಬ ಕಲಾವಿದರ ಒಕ್ಕೂಟಕ್ಕೆ ನೆರವು ನೀಡಿದರು. 

	ಪ್ಯಾರಿಸ್ಸಿನಲ್ಲಿ ಇವರ ಚಿತ್ರಗಳು ವಿಮರ್ಶಕರ ಮೆಚ್ಚಿಗೆ ಪಡೆದಿವೆ. ತಾಯಿ ಮಗುವಿನ ವಿವಿಧ ಮುಖಗಳ ಭಾವನೆಗಳ ಇವರ ಚಿತ್ರಗಳು ಬಹು ಜನರನ್ನು ಆಕರ್ಷಿಸಿವೆ. ಭಾರತೀಯತ್ತ್ವದ ಎಲ್ಲ ಗುಣಗಳನ್ನೂ ಇವರ ಕೃತಿಗಳು ತಮ್ಮದೇ ಆದ ಶೈಲಿಯಿಂದ ಮೆರೆಸಿವೆ.												(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ